14/11/2020
ತಾಳಗುಂದದ ಶಾಸನೋಕ್ತ ಕೆರೆಗಳು..
ಕರ್ನಾಟಕದ ಶಾಸನಗಳಲ್ಲಿ ಕೆರೆಯ ಮೊದಲ ಉಲ್ಲೇಖ ಚಂದ್ರವಳ್ಳಿ ಶಾಸನದಲ್ಲಿ ( ಮಯೂರನ ಅವಧಿ) ಕಂಡುಬರುತ್ತದೆ. ನಂತರ ಕ್ರಿ.ಶ. 450 ರ ಅವಧಿಯಲ್ಲಿ ಕದಂಬರ ಕಾಕುತ್ಸ ವರ್ಮನು ತಾಳಗುಂದದ ಶಿವಾಲಯದ ನಿರ್ವಹಣೆಗಾಗಿ ಒಂದು ಕೆರೆಯನ್ನು ಕಟ್ಟಿಸುತ್ತಾನೆ. ವಿಶೇಷವೆಂದರೆ ಈ ಕೆರೆಯ ನಿರ್ಮಾಣ ಕಾರ್ಯವನ್ನು ಒಂದೇ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಈಗಿನ ಪ್ರಣವೇಶ್ವರ ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಈಗಲೂ ವಿಶೇಷವಾಗಿ ಗೋಚರಿಸುತ್ತದೆ.
ತಾಳಗುಂದದ ಹಿರಿಯ ಕರೆಯನ್ನು ಕ್ರಿ.ಶ 935ರ ಶಾಸನದ ಪ್ರಕಾರ ಆಗಿನ ಮಂತ್ರಿಯಾಗಿದ್ದ ಪುಳಿಯಮ್ಮ ಹೆಗ್ಗಡೆಯವರು ಕಟ್ಟಿಸಿದ ವಿಷಯದ ಪ್ರಸ್ತಾಪವಿದೆ. ಕೆರೆಯನ್ನು ಕಟ್ಟಿ ಎರಡು ಬೃಹತ್ ತೂಬುಗಳನ್ನು ನಿರ್ಮಿಸಿ ನೀರಾವರಿಗೆ ಅಂದೇ ಅವಕಾಶ ಕಲ್ಪಸಿ ಕೊಡಲಾಗಿದೆ. ಈ ಕೆರೆಯ ಕೆಳಗೆ 11 ನೇ ಶತಮಾನದ
ವೇಳೆಗೆ ಸಾಕಷ್ಟು ಪ್ರಮಾಣದ ಅಡಿಕೆ ತೋಟಗಳ ಉಲ್ಲೇಖವಿದೆ. ಪುಳಿಯಮ್ಮ ಪೆರ್ಗಡೆಗಳು ಕೆರೆಯನ್ನು ಕಟ್ಟಿಸಿದ್ದಲ್ಲದೆ, ಇಲ್ಲಿನ ಮೂಲ ದೇವರ ನಂದಾ ದೀವಿಗೆಗೆ ನೈವೇದ್ಯಕ್ಕೆ ಹಾಗೂ ಗ್ರಂಥಾಧ್ಯಯನಕ್ಕೆ ಸುಮಾರು ಎಪ್ಪತ್ತಾರು ಮತ್ತರು ಗದ್ದೆಯನ್ನು ದಾನ ನೀಡಿದ್ದಾರೆ...
ತಾಳಗುಂದದ ಹೆಗ್ಗಡೆಯಾದ ತ್ರಿವಳಿ ಭಟ್ಟರು ತಾಣಗುಂದೂರಿನ ಮೂವತ್ತೆರೆಡು ಸಾವಿರ ಧೋತಕದ ಮಹಾಜನಗಳ ಬಳಿ ಕೆರೆ ಹಾಗೂ ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಲು ಬಿನ್ನಹ ಮಾಡಿಕೊಂಡಾಗ ಮಹಾಜನರು ಸಂತೋಷದಿಂದ ತಾಳಗುಂದದ ಉತ್ತರ ದಿಕ್ಕಿನ ಹಾದಿಯ ಬಳಿ ಇರುವ ಭೂಮಿಯನ್ನು ನೀಡುತ್ತಾರೆ (ಬಿಸಲಹಳ್ಳಿ ಬಳಿ). ತ್ರಿವಳಿ ಭಟ್ಟರು ಚಾಲುಕ್ಯ ವಿಕ್ರಮ ಕಾಲದ (ಕ್ರಿ.ಶ.1107) ಮೂವತ್ತೆರಡನೆಯ ಸಂವತ್ಸರದ ಚೈತ್ರ ಮಾಸದ ತದಿಗೆ ಬೃಹಸ್ಪತಿವಾರದಂದು ಮಹಾಜನರು ನೀಡಿದ ಭೂಮಿಯಲ್ಲಿದ್ದ ಚಿಕ್ಕದಾದ ಕೆರೆಯನ್ನು ಅಗಲಿಸಿ ದೊಡ್ಡದಾದ ಕೆರೆ ನಿರ್ಮಿಸಿ ಅದರ ದಡದಲ್ಲಿಯೇ ಶಿವಾಲಯವನ್ನು ಕಟ್ಟಿಸುತ್ತಾರೆ. ಅರವಟ್ಟಿಗೆಯ ಅಂಬಲಿ ನಿರ್ವಹಣೆ ಮತ್ತು ನೀರಿನ ನಿರ್ವಹಣೆಯನ್ನು ಮಾಡುವವರಿಗಾಗಿ ಹಲವು ಕಡೆ ಅರವತ್ತು ಮೂರು ಕಮ್ಮ ಪ್ರಮಾಣದ ಭೂಮಿಯನ್ನು ತಾಳಗುಂದದ ಮಹಾಜಿನರ ಪಾದಪೂಜೆ ಮಾಡಿ ದಾನವಾಗಿ ನೀಡುತ್ತಾನೆ.